ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ರಾಜ್ಯ ಸರ್ಕಾರದ ಬಳಿ ಉತ್ತರವಿಲ್ಲ - ರಾಜ್ಯಪಾಲರ ಭಾಷಣ - ಪ್ರತಿಪಕ್ಷಗಳ ಟೀಕೆ

ಬೆಂಗಳೂರು: ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ರಾಜ್ಯ ಸರ್ಕಾರದ ಬಳಿ ಉತ್ತರವಿಲ್ಲ - ರಾಜ್ಯಪಾಲರ ಭಾಷಣ - ಪ್ರತಿಪಕ್ಷಗಳ ಟೀಕೆ

Thu, 25 Feb 2010 16:32:00  Office Staff   S.O. News Service

ಬೆಂಗಳೂರು-ಫೆಬ್ರವರಿ ೨೫-ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಉತ್ತರ ನೀಡದ ರಾಜ್ಯಪಾಲರ ಭಾಷಣ ಈ ಸರ್ಕಾರಕ್ಕೆ ದಿಕ್ಕು ದೆಸೆಯಿಲ್ಲ ಎಂಬುದನ್ನು ಸಾಬೀತು ಮಾಡಿದೆ ಎಂದು ಪ್ರತಿಪಕ್ಷಗಳು ಇಂದಿಲ್ಲಿ ಟೀಕೆ ಮಾಡಿವೆ.

 

 

ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಮಾಡಿದ ಭಾಷಣದ ಬಗ್ಗೆ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಮೋಟಮ್ಮ, ರೇವಣ್ಣ ಮತ್ತಿತರರು ರಾಜ್ಯಪಾಲರ ಭಾಷಣ ಹೊಸತೇನನ್ನೂ ಹೇಳದೆ ಈ ಹಿಂದೆ ಯಡಿಯೂರಪ್ಪ ಹೇಳಿದ್ದನ್ನೇ ಹೇಳಿದೆ ಎಂದು ವ್ಯಂಗ್ಯವಾಡಿದರು.

 

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ಧರಾಮಯ್ಯ, ರಾಜ್ಯ ಕಾಡುತ್ತಿರುವ ದುರಂತಗಳಿಗೆ ಪರಿಹಾರದ ಬಗ್ಗೆ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿಲ್ಲ. ಈ ಹಿಂದೆ ಅನೇಕ ಬಾರಿ ಅವರೇ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಯಾವ ಉದ್ದೇಶದಿಂದ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು ಎಂಬುದು ಜನತೆಗೆ ತಿಳಿದಿದೆ ಎಂದು ಮಾರ್ಮಿಕವಾಗಿ ಚುಚ್ಚಿದರು.

 

ಇದೊಂದು ಸರ್ಕಾರದ ಭಾಷಣ. ಸರ್ಕಾರ ನೀಡಿದ ಭಾಷಣವನ್ನು ರಾಜ್ಯಪಾಲರು ಓದಿದ್ದಾರೆ. ಇದರಲ್ಲಿ ಹೇಳಿಕೊಳ್ಳುವಂತದ್ದು ಏನೂ ಇಲ್ಲ. ಇದಕ್ಕೆ ದಿಕ್ಕು ದಿಶೆಯಿಲ್ಲ ಎಂದು ಟೀಕಿಸಿದರು.

 

ಇದೇ ಸಂದರ್ಭದಲ್ಲಿ ಮಾತನಾಡಿದ ಮೋಟಮ್ಮ, ಕಳೆದ ಒಂದು ವರ್ಷದಲ್ಲಿ ಸೂರಿಲ್ಲದವರಿಗೆ ಒಂದು ಮನೆ ನಿರ್ಮಿಸಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಈಗ ನೋಡಿದರೆ ರಾಜ್ಯಪಾಲರ ಭಾಷಣದಲ್ಲಿ ಸುಳ್ಳು ಹೇಳಿಸಿದ್ದಾರೆ ಎಂದು ಆರೋಪ ಮಾಡಿದರು.

 

 

ನೆರೆ ಹಾವಳಿಗೆ ತುತ್ತಾದ ಸಂತ್ರಸ್ಥರಿಗೆ ಪುನರ್‌ವಸತಿ ಕಲ್ಪಿಸಲಾಗದ ಈ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಇಲ್ಲ ಸಲ್ಲದ್ದನ್ನು ಹೇಳಿಕೊಂಡಿದೆ ಎಂದು ದೂರಿದರು.

 

ಜೆಡಿ‌ಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ: ಈ ಹಿಂದಿನ ಸರ್ಕಾರಗಳು ರಾಜ್ಯಪಾಲರ ಮೂಲಕ ಬೃಹತ್ ಗ್ರಂಥಗಳನ್ನು ಪಠಣ ಮಾಡಿಸುತ್ತಿದ್ದರು. ಈ ಸರ್ಕಾರ ೩೧ ಪುಟದ ಭಾಷಣ ಓದಿಸಿ ಸಾಧನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

 

 

 

ಕಳೆದ ಒಂದು ವರ್ಷದಿಂದ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗಲಿಲ್ಲ. ನನ್ನ ಕಾಲದಲ್ಲಿ ಹಮ್ಮಿಕೊಂಡ ಕೆಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ನಮ್ಮವೂ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ.

 

 

ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವ ಮುನ್ನ ಐದು ವಿದ್ಯುತ್ ಕಂಪನಿಗಳು ಲಾಭದಲ್ಲಿದ್ದವು. ಆದರೆ ಇದೀಗ ಈ ಕಂಪನಿಗಳು ಐದು ಸಾವಿರ ಕೋಟಿ ರೂ. ನಷ್ಟ ಅನುಭವಿಸಿರುವುದು ಈ ಸರ್ಕಾರದ ಸಾಧನೆ ಎಂದರು.


Share: